ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರಿಗೆ ಮಂಗಳೂರಿನಲ್ಲಿ ಅದ್ಧೂರಿ ಸಾರ್ವಜನಿಕ ಸನ್ಮಾನ: ಗಣ್ಯರಿಂದ ಗುಣಗಾನ

ಮಂಗಳೂರು: ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರಿಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಟೌನ್ ಹಾಲ್‌ನಲ್ಲಿ (ಪುರಭವನ) ನ. 23 ರಂದು ಸಾರ್ವಜನಿಕ ಸನ್ಮಾನ ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಡಾ. ಎಂ. ವೀರಪ್ಪ ಮೊಯ್ಲಿ, “ಸಲೀಂ ಅಹ್ಮದ್ ಅವರು ತಳಮಟ್ಟದಿಂದ ಬೆಳೆದು ಸಂಘಟನಾ ಸಾಮರ್ಥ್ಯ ಹಾಗೂ ದಕ್ಷತೆ ಪ್ರದರ್ಶಿಸಿದ ನಾಯಕ. ಸ್ವಾಮಿ ವಿವೇಕಾನಂದರ ತತ್ವಗಳನ್ನು ಪಾಲಿಸಿಕೊಂಡು, ರಾಜಕೀಯದಲ್ಲಿ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿ ಇಂದು ಉನ್ನತ ಸ್ಥಾನಕ್ಕೇರಿದ್ದಾರೆ.”

ಎಂದು ಶ್ಲಾಘಿಸಿದರು. ಭ್ರಷ್ಟಾಚಾರದ ವಿರುದ್ಧದ ಹೋರಾಟದ ಸಂದರ್ಭಗಳನ್ನು ಸ್ಮರಿಸಿದ ಅವರು, “ನಾನು ಮುಖ್ಯಮಂತ್ರಿ ಹಾಗೂ ಸಚಿವನಾಗಿದ್ದಾಗ ಉಳುವವನೇ ಹೊಲದೊಡೆಯ ಭೂ ಸುಧಾರಣಾ ಮಸೂದೆ, ಅಕ್ರಮ-ಸಕ್ರಮ ಮತ್ತು ಸಿಇಟಿ ಜಾರಿಯಂತಹ ಸಂದರ್ಭಗಳಲ್ಲಿ ನನಗೆ ಎರಡು-ಮೂರು ಬಾರಿ ‘ವಿಷ’ ನೀಡಿದ್ದರು. ಜನಪರ ಕೆಲಸ ಮಾಡುವಾಗ ಸವಾಲುಗಳು, ತೊಂದರೆಗಳು ಸರ್ವೇಸಾಮಾನ್ಯ. ಸಲೀಂ ಅಹ್ಮದ್ ಮತ್ತು ಯು.ಟಿ. ಖಾದರ್ ಅವರು ಯಾವುದಕ್ಕೂ ಹೆದರದೆ ಉತ್ತಮ ಕೆಲಸಗಳನ್ನು ಮಾಡಬೇಕು. ಜಿಲ್ಲೆಯ ಪಾಲಿಗೆ ಸಲೀಂ ಮತ್ತು ಖಾದರ್ ಇಬ್ಬರು ಉತ್ತಮ ನಾಯಕರು.” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿಶ್ಚಲಾನಂದನಾಥ ಮಹಾಸ್ವಾಮೀಜಿ ಮಾತನಾಡಿ, ” 45 ವರ್ಷಗಳ ರಾಜಕೀಯದಲ್ಲಿ ಕಪ್ಪುಚುಕ್ಕೆ ಇಲ್ಲದೆ, ಶುದ್ಧ, ಪಾರದರ್ಶಕ ಹಾಗೂ ನ್ಯಾಯಬದ್ಧ ನಾಯಕನಾಗಿ ಕರ್ತವ್ಯ ನಿರ್ವಹಿಸಿರುವ ಸಲೀಂ ಅಹ್ಮದ್ ಅವರಿಗೆ ಸಭಾಪತಿಯ ಅರ್ಹ ಸ್ಥಾನ ದೊರಕಿದೆ. ತಳಮಟ್ಟದಿಂದ ಬೆಳೆದು ಉನ್ನತ ಸ್ಥಾನಕ್ಕೆ ಬಂದಿರುವ ಇಂತಹ ನಾಯಕರ ಅಗತ್ಯ ಪ್ರಚಲಿತ ಸಮಾಜಕ್ಕೆ ಇದೆ. ಸಲೀಂ ಅಹ್ಮದ್ ಅವರು ಈ ವಯಸ್ಸಿನಲ್ಲಿಯೇ ಉತ್ತಮ ಕೆಲಸಗಳನ್ನು ಮಾಡಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರಿಗೆ ದೀರ್ಘಾಯುಷ್ಯ ಸಿಗಲಿ ಮತ್ತು ಅವರಿಂದ ರಾಜ್ಯಕ್ಕೆ ಇನ್ನಷ್ಟು ಸೇವೆ ಸಿಗುವಂತಾಗಲಿ” ಎಂದು ಶುಭ ಹಾರೈಸಿದರು.

ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಫಾ. ಫ್ರಾನ್ಸಿಸ್ ರೋವಿಯರ್ ಗೋಮ್ಸ್ ಅವರು ಆಶೀರ್ವಚನ ನೀಡಿ ಸಲೀಂ ಅವರ ಸೇವಾ ಮನೋಭಾವ ಮತ್ತು ಸಂಘಟನಾ ಶಕ್ತಿ ಕೊಂಡಾಡಿ, ಸಮಯದ ಮಹತ್ವವನ್ನು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಫರೀದ್ ಅವರು ಮಾತನಾಡಿ,
“ಇಂದು ಸಲೀಂ ಅಹ್ಮದ್ ಅವರಿಗೆ ಮಾಡುವ ಸನ್ಮಾನದ ಮೂಲಕ ಅವರ ಸಂಘಟನಾ ಕೆಲಸ ಹಾಗೂ ಕಾರ್ಯಚಟುವಟಿಕೆಗಳನ್ನು ಯುವ ಕಾರ್ಯಕರ್ತರಿಗೆ ತಿಳಿಸುವ ಕೆಲಸವಾಗಿದೆ. ಸಲೀಂ ಅಹ್ಮದ್ ಅವರೊಂದಿಗಿನ ತಮ್ಮ ಹಳೆಯ ನೆನಪುಗಳು, ಅವರ‌ ಜೊತೆ ಇರುವ ಒಡನಾಟವನ್ನು ಮೆಲುಕು ಹಾಕಿದರು ಹಾಗೂ ಅವರ ರಾಜಕೀಯ ಮತ್ತು ಸಾಮಾಜಿಕ ಬದ್ಧತೆಯನ್ನು ಶ್ಲಾಘಿಸಿದರು.”
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಲೀಂ ಅಹ್ಮದ್, “ಪ್ರಥಮವಾಗಿ ಅವರ ಜೀವನದಲ್ಲಿದ್ದ ಒಬ್ನ ಸ್ನೇಹಿತ ದಿ. ಬದ್ರುದ್ದೀನ್ ಅವರನ್ನು ಸ್ಮರಿಸುತ್ತಾ ಬಂದ ಹಾದಿ ಮರೆಯದಂತೆ, ದಿ.‌ಬದ್ರುದ್ದೀನ್ ಅವರಿಗೆ ಚಿರಶಾಂತಿ ತಿಳಿಸಿದರು. ಮುಂದೆ ಮಾತನಾಡುತ್ತಾ ಬಸವಣ್ಣನವರ ಅನುಭವ ಮಂಟಪವೇ ನನಗೆ ರಾಜಕೀಯ ಸ್ಫೂರ್ತಿಯಾಗಿದ್ದು, ಸಂವಿಧಾನಕ್ಕೆ ಪೂರಕವಾಗಿ ಸಭಾಪತಿ ಸ್ಥಾನದ ಜವಾಬ್ದಾರಿ ಮತ್ತು ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಎನ್‌ಎಸ್‌ಯುಐ ಮತ್ತು ವಿದ್ಯಾರ್ಥಿ ಸಂಘಟನೆಯಿಂದ ನನ್ನ ಪಯಣ ಆರಂಭವಾಯಿತು. 45 ವರ್ಷಗಳ ಸಂಘಟನಾ ಹಾದಿಯಲ್ಲಿ ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ, ಜನಾರ್ದನ ಪೂಜಾರಿ ಸೇರಿದಂತೆ ಹಲವು ನಾಯಕರ ಸಹಕಾರ ಸ್ಮರಣೀಯ. ಇದೀಗ ಪಕ್ಷಕ್ಕೆ ರಾಜೀನಾಮೆ ನೀಡಿ ಸಭಾಪತಿ ಸ್ಥಾನ ವಹಿಸಿಕೊಂಡಿದ್ದು, ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ” ಎಂದು ತಿಳಿಸಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಅವರು ಸಲೀಂ ಅಹ್ಮದ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅಭಿನಂದನಾ ಭಾಷಣ ಮಾಡಿ, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಸಮಿತಿ ರಚನೆಯಾಗಿದ್ದು, ಸರ್ಕಾರ ಪೂರಕ ಸಲಹೆ ಹಾಗೂ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಈ ಸಂಧರ್ಭದಲ್ಲಿಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಜೆ.ಆರ್. ಲೋಬೋ, ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹಿಂ, ಡಾ. ಯು.ಕೆ. ಮೋನು, ನಿಗಮ-ಮಂಡಳಿಗಳ ಅಧ್ಯಕ್ಷರುಗಳಾದ ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಲಾವಣ್ಯ ಬಲ್ಲಾಳ್, ಮಂಜುನಾಥ ಪೂಜಾರಿ, ಕೃಷ್ಣಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಇನಾಯತ್ ಅಲಿ, ಎಂ.ಎಸ್. ಮುಹಮ್ಮದ್, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, ಸಂತೋಷ್ ಕುಮಾರ್ ಶೆಟ್ಟಿ, ಸಲೀಂ ಅಹ್ಮದ್ ಸಾರ್ವಜನಿಕ ಸನ್ಮಾನ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಚಂಡೆ, ವಾದ್ಯ, ಪಟಾಕಿಗಳ ಸದ್ದು ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಪ್ರತಿಯೊಂದು ಈ ಸಮಾರಂಭಕ್ಕೆ ಇನ್ನಷ್ಟು ಮೆರಗನ್ನು ತಂದಿತ್ತು. ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ಸ್ಥಾನಮಾನ) ಕರ್ನಾಟಕ ಸರಕಾರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಸನ್ಮಾನ ಸಮಿತಿ ಅಧ್ಯಕ್ಷ, ಟಿ.ಎಂ. ಶಾಹಿದ್ ತೆಕ್ಕಿಲ್ ಸ್ವಾಗತಿಸಿದರು. ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು, ಶಶಿಧರ ಹೆಗ್ಡೆ ವಂದಿಸಿದರು.

Comments

Leave a Reply

Your email address will not be published. Required fields are marked *