ಮಂಗಳೂರು: ಡಿಸೆಂಬರ್ 2ರಿಂದ 11ರವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲು ಆದ್ಯತೆ ನೀಡಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚಿನ ವಿಷಯಗಳ ಚರ್ಚೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯವಿದ್ದರೆ ತಡರಾತ್ರಿವರೆಗೂ ಕಲಾಪ ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ. ಅಲ್ಲದೆ, ಅಧಿವೇಶನದ ಅವಧಿಯನ್ನು ಒಂದು ದಿನ ವಿಸ್ತರಿಸುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಬಹುದು ಎಂದು ಹೇಳಿದರು. ವರ್ಷಕ್ಕೆ ಕನಿಷ್ಠ 60 ದಿನಗಳಾದರೂ ಸದನ ನಡೆಯಬೇಕು ಎಂಬುದು ತಮ್ಮ ಆಶಯವಾಗಿದ್ದು, ಈ ಕುರಿತು ಸರ್ಕಾರದ ಗಮನ ಸೆಳೆಯಲಾಗಿದೆ ಎಂದರು.
ದಕ್ಷಿಣ ಕನ್ನಡ ಹಾಗೂ ವಿವಿಧ ವರ್ಗಗಳ ಸಮಸ್ಯೆಗಳಿಗೆ ಒತ್ತು: ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ಯೆಗಳ ಕುರಿತು ಚರ್ಚಿಸಲು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಂಜುನಾಥ ಭಂಡಾರಿ ಹಾಗೂ ಪಿ.ವಿ. ಮೋಹನ್ ಅವರು ಈಗಾಗಲೇ ಮನವಿ ಸಲ್ಲಿಸಿದ್ದಾರೆ. ಇವರೊಂದಿಗೆ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗಗಳ ಸಮಸ್ಯೆಗಳಿಗೂ ಆದ್ಯತೆ ನೀಡಲಾಗುವುದು. ವಿಶೇಷವಾಗಿ ಅಂಗವಿಕಲರ ಸೌಲಭ್ಯಗಳ ಕುರಿತು ಸಾನಿಧ್ಯ ಟ್ರಸ್ಟ್ ಪ್ರತಿನಿಧಿಗಳು ಗಮನಕ್ಕೆ ತಂದಿರುವ ವಿಚಾರಗಳು, ಆಶಾ ಕಾರ್ಯಕರ್ತೆಯರು, ಕಬ್ಬು ಬೆಳೆಗಾರರು, ರೈತರು ಹಾಗೂ ಕಾರ್ಮಿಕರ ಸಮಸ್ಯೆಗಳ ಬಗ್ಗೆಯೂ ಸದನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರಾಗಿ ಆಯ್ಕೆಯಾಗಿರುವ ಮಂಜುನಾಥ ಭಂಡಾರಿ ಅವರಿಗೆ ಸಭಾಪತಿಗಳು ಅಭಿನಂದನೆ ಸಲ್ಲಿಸಿದರು.
ಸದನದಲ್ಲಿ ಸ್ವೀಕೃತವಾದ ಪ್ರಶ್ನೆಗಳ ವಿವರ: ಈ ಬಾರಿಯ ಅಧಿವೇಶನಕ್ಕೆ ವಿಧಾನ ಪರಿಷತ್ತಿನಲ್ಲಿ ಇದುವರೆಗೆ ಒಟ್ಟು 839 ಪ್ರಶ್ನೆಗಳು ಸ್ವೀಕೃತವಾಗಿದ್ದು, ಇದರಲ್ಲಿ 60 ಚುಕ್ಕೆ ಗುರುತಿನ ಹಾಗೂ 779 ಚುಕ್ಕೆ ರಹಿತ ಪ್ರಶ್ನೆಗಳಾಗಿವೆ. ಜೊತೆಗೆ ನಿಯಮ 72ರಡಿ 22 ಗಮನ ಸೆಳೆಯುವ ಸೂಚನೆಗಳು ಹಾಗೂ ನಿಯಮ 330ರಡಿ 17 ಸೂಚನೆಗಳು ಸಲ್ಲಿಕೆಯಾಗಿವೆ.
ಪಕ್ಷಾತೀತ ಕಾರ್ಯನಿರ್ವಹಣೆ ಹಾಗೂ ವಿಧೇಯಕಗಳ ಚರ್ಚೆ: ಸಭಾಪತಿಯಾಗಿ ಆಯ್ಕೆಯಾದ ಬಳಿಕ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, 45 ವರ್ಷಗಳ ಕಾಲ ಪಕ್ಷದಲ್ಲಿ ದುಡಿದಿದ್ದರೂ ಈಗ ಪಕ್ಷಾತೀತವಾಗಿ ಎಲ್ಲ ಸದಸ್ಯರಿಗೂ ಸಮಾನ ನ್ಯಾಯ ಒದಗಿಸುವುದು ತಮ್ಮ ಜವಾಬ್ದಾರಿಯಾಗಿದೆ ಎಂದರು. ವಿಶೇಷವಾಗಿ ವಿರೋಧ ಪಕ್ಷದ ಸದಸ್ಯರಿಗೆ ತಮ್ಮ ಅಭಿಪ್ರಾಯ ಮಂಡಿಸಲು ಹೆಚ್ಚಿನ ಅವಕಾಶ ನೀಡಲಾಗುವುದು. ಇನ್ನು ಮತಾಂತರ ನಿಷೇಧ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಗಳ ತಿದ್ದುಪಡಿ ವಿಧೇಯಕಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ವಿಧೇಯಕ ಮಂಡಿಸಬೇಕೆಂಬುದು ಸರ್ಕಾರಕ್ಕೆ ಬಿಟ್ಟ ವಿಚಾರ, ಆದರೆ ಸದನದಲ್ಲಿ ಮಂಡನೆಯಾದ ಬಳಿಕ ಅವುಗಳ ಕುರಿತು ಚರ್ಚೆಗೆ ಪೂರ್ಣ ಅವಕಾಶ ನೀಡಿ ಸರ್ಕಾರದಿಂದ ಉತ್ತರ ಕೊಡಿಸುವುದು ತಮ್ಮ ಕರ್ತವ್ಯ ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನೆಗಳ ಆಲಿಕೆ ಮತ್ತು ಸನ್ಮಾನಗಳ ಕುರಿತು ಸ್ಪಷ್ಟನೆ: ಕಳೆದ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಸುಮಾರು 70ರಿಂದ 80 ಪ್ರತಿಭಟನೆಗಳು ನಡೆದಿದ್ದವು. ಪ್ರಜಾಪ್ರಭುತ್ವದಲ್ಲಿ ಹೋರಾಟಗಳು ಸಹಜವಾಗಿದ್ದು, ಈ ಬಾರಿಯೂ ಪ್ರತಿಭಟನಾಕಾರರ ಅಹವಾಲುಗಳನ್ನು ಆಲಿಸಿ ಸದನದ ಗಮನಕ್ಕೆ ತರಲಾಗುವುದು, ಪ್ರತಿಭಟನೆಗಳನ್ನು ಹತ್ತಿಕ್ಕುವ ಉದ್ದೇಶ ಸರ್ಕಾರಕ್ಕಿಲ್ಲ ಎಂದರು. ಸಾರ್ವಜನಿಕ ಸನ್ಮಾನ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಮುಖಂಡರು ಭಾಗವಹಿಸುತ್ತಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಸಚಿವ ಯು.ಟಿ. ಖಾದರ್ ಸೇರಿದಂತೆ ಹಲವರು ಪ್ರೀತಿ-ಗೌರವದಿಂದ ಸನ್ಮಾನಿಸಿದ್ದಾರೆ. ರಾಜ್ಯದ ಸುಮಾರು 20 ಜಿಲ್ಲೆಗಳಲ್ಲಿ ಹಾಗೂ ವಿವಿಧ ಪಕ್ಷದವರಿಂದಲೂ ಸನ್ಮಾನ ಸ್ವೀಕರಿಸಿದ್ದೇನೆ, ಆದರೆ ಸಭಾಪತಿ ಸ್ಥಾನದ ಗೌರವಕ್ಕೆ ಚ್ಯುತಿ ಬರುವಂತಹ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.
ರಾಜ್ಯದ 7 ಕೋಟಿ ಜನರ ಪೈಕಿ ಕೇವಲ 300 ಮಂದಿಗೆ ಮಾತ್ರ ಶಾಸಕರಾಗುವ ಅವಕಾಶ ಸಿಗುತ್ತದೆ. ಆದ್ದರಿಂದ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಕಲಾಪಗಳಿಗೆ ಅಡ್ಡಿಪಡಿಸದೆ, ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಸದನವನ್ನು ಜನರ ಧ್ವನಿಯಾಗಿಸಬೇಕು ಎಂದು ಸಲೀಂ ಅಹ್ಮದ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹಾಗೂ ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ (ಸಚಿವ ಸ್ಥಾನಮಾನ) ಟಿ.ಎಂ. ಶಾಹಿದ್ ತೆಕ್ಕಿಲ್ ಉಪಸ್ಥಿತರಿದ್ದರು.

Leave a Reply