

ಚಿಕ್ಕಮಗಳೂರು: ಮಲ್ಲಂದೂರು ಸಮೀಪದ ಬಸಗೋಡು ಕಾಫಿ ಎಸ್ಟೇಟ್‌ನಲ್ಲಿ ಮಾಲೀಕರಿಂದ ಅಮಾನವೀಯ ಹಲ್ಲೆ ಮತ್ತು ಬೆದರಿಕೆಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮೂಲದ ಮಹಿಳಾ ಕಾರ್ಮಿಕರನ್ನು ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಇಂದು ಭೇಟಿಯಾಗಿ ಸಾಂತ್ವನ ಹೇಳಿದರು.
ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ತೆರಳಿದ ಶಾಹಿದ್ ತೆಕ್ಕಿಲ್ ಅವರು, ಹಲ್ಲೆ ಹಾಗೂ ದೌರ್ಜನ್ಯದಿಂದ ನೊಂದು ಚಿಕಿತ್ಸೆ ಪಡೆಯುತ್ತಿರುವ ವೀಣಾ ಸೇರಿದಂತೆ ಗಾಯಾಳು ಕಾರ್ಮಿಕರ ಆರೋಗ್ಯವನ್ನು ಡಾ.ದೇವರರಾಜ್ ಟಿ.ಎಂ (ಸರ್ಜನ್) ಅವರ ಜೊತೆ ವಿಚಾರಿಸಿದರು.

ಈ ವೇಳೆ ಘಟನೆಯ ಸಂಪೂರ್ಣ ವಿವರವನ್ನು ಸಂತ್ರಸ್ತರಿಂದ ಪಡೆದುಕೊಂಡ ಅವರು, ವೈದ್ಯರೊಂದಿಗೆ ಮಾತನಾಡಿ ಉತ್ತಮ ಚಿಕಿತ್ಸೆ ನೀಡುವಂತೆ ಸೂಚಿಸಿದರು.
ಸಂತ್ರಸ್ತರಿಗೆ ಧೈರ್ಯ ತುಂಬಿದ ಶಾಹಿದ್ ತೆಕ್ಕಿಲ್, “ಕಾರ್ಮಿಕರ ಮೇಲಿನ ಇಂತಹ ದೌರ್ಜನ್ಯ ಮತ್ತು ಬೆದರಿಕೆಯನ್ನು ಸರ್ಕಾರ ಎಂದಿಗೂ ಸಹಿಸುವುದಿಲ್ಲ. ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ಸಹೋದರರಾದ ಭರತ್ ಮತ್ತು ಸತ್ಯಕೀರ್ತಿ ಅವರನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಿಮಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಕಲ್ಯಾಣ ಸೌಲಭ್ಯಗಳು, ಸೂಕ್ತ ರಕ್ಷಣೆ ಹಾಗೂ ನ್ಯಾಯವನ್ನು ಖಂಡಿತವಾಗಿಯೂ ಒದಗಿಸಿಕೊಡಲಾಗುವುದು” ಎಂದು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಸಿ.ಟಿ. ಜಯಕುಮಾರ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಚಿಕ್ಕಮಗಳೂರು, ಪ್ರಭಾಕರ್
ಹಿರಿಯ ಕಾರ್ಮಿಕ ನಿರೀಕ್ಷಕರು, ಪ್ರವೀಣ್ ಕುಮಾರ್
ಹಿರಿಯ ಕಾರ್ಮಿಕ ನಿರೀಕ್ಷಕರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರೇವಣ್ಣ ಉಪಸ್ಥಿತರಿದ್ದರು.



Leave a Reply