ಚಿಕ್ಕಮಗಳೂರು: ಮಲ್ಲಂದೂರು ಸಮೀಪದ ಬಸಗೋಡು ಕಾಫಿ ಎಸ್ಟೇಟ್‌ನಲ್ಲಿ ತಮಿಳುನಾಡು ಮೂಲದ ವಲಸೆ ಕಾರ್ಮಿಕರ ಮೇಲೆ ನಡೆದಿರುವ ಅಮಾನವೀಯ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳಾದ ಭರತ್ ಮತ್ತು ಸತ್ಯಕೀರ್ತಿ ಸಹೋದರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ಸ್ಥಾನಮಾನ) ಟಿ.ಎಂ. ಶಾಹೀದ್ ತೆಕ್ಕಿಲ್ ಒತ್ತಾಯಿಸಿದ್ದಾರೆ.
ನವೆಂಬರ್ 27ರ ಶುಕ್ರವಾರ ಸಂಜೆ, ಹಣದ ವಿಚಾರವಾಗಿ ನಡೆದ ವಾಗ್ವಾದದ ಬಳಿಕ ತಮ್ಮ ಊರಿಗೆ ಮರಳಲು ಸಿದ್ಧರಾಗಿದ್ದ ತಮಿಳುನಾಡಿನ 4-5 ಕಾರ್ಮಿಕರನ್ನು—ಮಹಿಳೆಯೂ ಸೇರಿದಂತೆ—ತಡೆದು, ದೊಣ್ಣೆಯಿಂದ ಮನಸೋಇಚ್ಛೆ ಹಲ್ಲೆ ನಡೆಸಲಾಗಿದೆ. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕುಡಾ ದಾಖಲಾಗಿದೆ. ಘಟನೆಯ ಬಳಿಕ ತಲೆಮರೆಸಿಕೊಂಡಿರುವ ಆರೋಪಿ ಸಹೋದರರ ಪತ್ತೆಗೆ ಪೊಲೀಸರು ಈಗಾಗಲೇ ಬಲೆ ಬೀಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕನಿಷ್ಠ ವೇತನ ಮಂಡಳಿ ಅಧ್ಯಕ್ಷ (ಸಚಿವ ಸ್ಥಾನಮಾನ) ಟಿ.ಎಂ. ಶಾಹೀದ್ ತೆಕ್ಕಿಲ್ ಅವರು, ಹಿರಿಯ ಪೊಲೀಸ್ ಅಧಿಕಾರಿಗಳಾದ ಐಜಿಪಿ (IGP) ಹಾಗೂ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ.
“ಕಾರ್ಮಿಕರ ಮೇಲಿನ ಇಂತಹ ದೌರ್ಜನ್ಯವನ್ನು ಸರ್ಕಾರ ಸಹಿಸುವುದಿಲ್ಲ. ತಲೆಮರೆಸಿಕೊಂಡಿರುವ ಆರೋಪಿಗಳಾದ ಭರತ್ ಮತ್ತು ಸತ್ಯಕೀರ್ತಿ ಅವರನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ನೊಂದ ಕಾರ್ಮಿಕರಿಗೆ ಸೂಕ್ತ ರಕ್ಷಣೆ, ಕಲ್ಯಾಣ ಸೌಲಭ್ಯ ಹಾಗೂ ನ್ಯಾಯ ಒದಗಿಸಬೇಕು” ಎಂದು ಟಿ.ಎಂ ಶಾಹಿದ್ ತೆಕ್ಕಿಲ್ ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದ್ದಾರೆ.

Leave a Reply