ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆ ಇಲ್ಲಿ ನೂತನ ಕಾಂಕ್ರೇಟ್ ರಸ್ತೆ ಉದ್ಘಾಟನೆ ಹಾಗೂ ಅಕ್ಷರದಾಸೋಹ ಕೊಠಡಿಯ ಗುದ್ದಲಿ ಪೂಜೆ ಕಾರ್ಯಕ್ರಮವು ನ.28 ರಂದು ನಡೆಯಿತು. ಗ್ರಾಮೀಣ ಪ್ರದೇಶದ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಸ್ಥಳೀಯ ಗಣ್ಯರು ಮತ್ತು ಜನಪ್ರತಿನಿಧಿಗಳು ಸಾಕ್ಷಿಯಾದರು.





ಗುದ್ದಲಿ ಪೂಜೆ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ( ಸಚಿವ ಸ್ಥಾನಮಾನ) ಟಿ.ಎಂ. ಶಹೀದ್ ತೆಕ್ಕಿಲ್ ಅವರು, ಗ್ರಾಮೀಣ ಪ್ರದೇಶದ ಕೊಲ್ಲಮೊಗರು ಭಾಗದ ಶಾಲೆಗಳಿಗೆ ತಮ್ಮ ಹಿಂದಿನ ನೆರವುಗಳನ್ನು ಸ್ಮರಿಸಿದರು. ಸುಮಾರು ಹದಿನೆಂಟು ವರ್ಷಗಳ ಹಿಂದೆ ತಾವು ಇಲ್ಲಿ ಉಚಿತವಾಗಿ ಕಂಪ್ಯೂಟರ್ ನೀಡಿದ್ದನ್ನು ಹಾಗೂ ಅರಂತೋಡು ಭಾಗದಲ್ಲಿ ಹೈಸ್ಕೂಲ್ ಮಂಜೂರು ಮಾಡಿಸುವಲ್ಲಿ ಶ್ರಮಿಸಿದ್ದನ್ನು ಅವರು ನೆನಪಿಸಿಕೊಂಡರು. ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುವುದು ಎಷ್ಟು ಶ್ರಮದಾಯಕ ಎಂಬುದು ನನಗೆ ಚೆನ್ನಾಗಿ ತಿಳಿದಿದೆ ಎಂದ ಅವರು, ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚಿನ ಮಹತ್ವ ಹಾಗೂ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಶಾಲೆಯ ಕೊಠಡಿ ಕೊರತೆ, ಅಧ್ಯಾಪಕರ ಕೊರತೆ ಸೇರಿದಂತೆ ಇತರ ಮೂಲಭೂತ ಸಮಸ್ಯೆಗಳ ಕುರಿತು ಪದಾಧಿಕಾರಿಗಳು ಅಗತ್ಯ ದಾಖಲೆಗಳೊಂದಿಗೆ ಮುಂದೆ ಬಂದಲ್ಲಿ, ಪತ್ರದ ಮೂಲಕ ಸರ್ಕಾರಕ್ಕೆ ಒತ್ತಾಯಿಸಿ ಅನುದಾನ ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಟಿ.ಎಂ. ಶಾಹೀದ್ ತೆಕ್ಕಿಲ್ ಭರವಸೆ ನೀಡಿದರು. ಶಾಲೆಯ ಶಿಸ್ತುಬದ್ಧ ವ್ಯವಸ್ಥೆ, ಮುಖ್ಯೋಪಾಧ್ಯಾಯರ ಕರ್ತವ್ಯನಿಷ್ಠೆ ಹಾಗೂ ಊರಿನ ಜನರ ಅಭಿವೃದ್ಧಿ ಪರ ಮನೋಭಾವಕ್ಕೆ ಅವರು ವಿಶೇಷ ಅಭಿನಂದನೆ ಸಲ್ಲಿಸಿದರು.


ನೂತನ ಕಾಂಕ್ರೇಟ್ ರಸ್ತೆಯನ್ನು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಅವರು ಉದ್ಘಾಟಿಸಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಜಯಶ್ರೀ ಚಾಂತಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಭವಾನಿಶಂಕರ ಪಿಂಡಿಮನೆ, ಮಾಧವ ಗೌಡ, ಡಾ. ಸೌರಭ್ ಬಿ., ಚಂದ್ರಶೇಖರ ಕೋನಡ್ಕ, ಲಕ್ಷ್ಮೀಶ ಶಿರೂರು ಹಾಗೂ ಮುಖ್ಯೋಪಾಧ್ಯಾಯರಾದ ರೇಷ್ಮಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


Leave a Reply